ಮನೆಯಲ್ಲಿ ಮಳೆ ನೀರು ಕೊಯ್ಲು(Rain Water Harvesting) ವಿಧಾನ ಅಳವಡಿಸಿಕೊಳ್ಳುವುದು ಹೇಗೆ ?

1) ನೀರಿನ ವಾಸ್ತವ

ಸ್ನೇಹಿತರೆ, ನಿಮಗೆ ಗೊತ್ತಿರುವ ಹಾಗೆ ದಿನೇ ದಿನೇ ಪ್ರಪಂಚದೆಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ಒಂದು ಗಂಭೀರ ಪರಿಸ್ಥಿತಿಗೆ ತಲುಪುತ್ತಿದೆ. ಆಫ್ರಿಕಾ ಖಂಡದ ಹಲವಾರು ದೇಶಗಳಲ್ಲಿ ಪರಿಸ್ಥಿತಿ ತುಂಬಾ ವಿಕೋಪಕ್ಕೆ ಹೋಗುತ್ತಿದೆ.

ನಿಮಗೆ ತಿಳಿದ ಹಾಗೆ ಇತ್ತೀಚಿನ ವಿದ್ಯಮಾನದ ಪ್ರಕಾರ 2016 – 2018 ರಲ್ಲಿ ಸೌತ್ ಆಫ್ರಿಕಾದ ಕೇಪ್ ಟೌನ್ ಪ್ರದೇಶವೇ ಒಂದು ಉದಾಹರಣೆ. ಆ ಸಮಯದಲ್ಲಿ ಅಲ್ಲಿನ ಸರ್ಕಾರ ಎಲ್ಲರಿಗೂ ಕುಡಿಯಲಿಕ್ಕೆ ಹಾಗು ಕೇವಲ ಎರಡು ನಿಮಿಷ ಸ್ನಾನ ಮಾಡುವಷ್ಟು ಮಾತ್ರ ನೀರನ್ನು ಸರಬರಾಜು ಮಾಡುತ್ತಿತ್ತು.

ನಮ್ಮ ರಾಜ್ಯ/ದೇಶದಲ್ಲೇನು ಪರಿಸ್ಥಿತಿ ಭಿನ್ನವಾಗಿಲ್ಲ. ಬಿಸಿಲಿನ ನಾಡಾದ ಬಳ್ಳಾರಿ, ರಾಯಚೂರಿನಂತ ಪ್ರದೇಶದಲ್ಲಿ ಬೇಸಿಗೆಯಲ್ಲಿ ಪ್ರತಿ ವರ್ಷ ಕುಡಿಯುವ ನೀರಿನ ಸಮಸ್ಯೆ ಇದ್ದೆ ಇದೆ. ನಾವು ನೀರಿಗಾಗಿ ದಿನೇದಿನೇ ಭೂಮಿಯ ಆಳಕ್ಕೆ ಇಳಿಯುತ್ತಿದ್ದೇವೆ. ನಾನು ನಿಮಗೆ ಈಗ ಭೂಮಿಯ ಮೇಲೆ ನೀರು ಎಷ್ಟಿದೆ ಅಂತ ಒಂದಷ್ಟು ಮಾಹಿತಿ ಕೆಳಗೆ ಹಾಕಿದ್ದೇನೆ.

ಈ ಭೂಮಿಯಲ್ಲಿ 71% ಪ್ರದೇಶ ನೀರಿನಿಂದ ಆವರಿಸಿದೆ. ಅಂದರೆ ಸರಿಸುಮಾರು 326 ಮಿಲಿಯನ್ ಕ್ಯೂಬಿಕ್ ಮೈಲಿಗಳಷ್ಟು. 97% ನೀರು ಸಮುದ್ರದ ನೀರು. ಇದು ಯಾವುದೇ ಉಪಯೋಗಕ್ಕೆ ಬರುವುದಿಲ್ಲ. ಇಸ್ರೇಲ್ ದೇಶ, ಈ ಸಮುದ್ರದ ನೀರನ್ನು ಸ್ವಲ್ಪ ಮಟ್ಟಿಗೆ ಕುಡಿಯುವ ನೀರಾಗಿ ಪರಿವರ್ತಿಸುತ್ತಾರೆ. ಆದರೆ ಇದು ತುಂಬಾ ದುಬಾರಿ ಯೋಜನೆ.

ಕೇವಲ 3% ಅಷ್ಟು ನೀರು ಮಾತ್ರ ಕುಡಿಯಲಿಕ್ಕೆ ಮತ್ತು ಇತರೆ ಉಪಯೋಗಗಳಿಗೆ ಲಭ್ಯ. ಇದರಲ್ಲಿ 2.5% ನೀರು ಮಂಜುಗೆಡ್ಡೆಯಲ್ಲಿ, ವಾತಾವರಣದಲ್ಲಿ ಹಾಗೂ ಮಣ್ಣಿನಲ್ಲಿ ಶೇಖರಣೆಯಾಗಿದೆ. ಇನ್ನು ಉಳಿದಿರುವುದು ೦.5% ಇದು ನಮ್ಮ ದಿನನಿತ್ಯದ ಉಪಯೋಗಳಿಗೆ ಲಭ್ಯ. !! ಭಾರತದಲ್ಲಿ, BIS ಸ್ಟ್ಯಾಂಡರ್ಡ್ ಪ್ರಕಾರ ಒಬ್ಬ ಮನುಷ್ಯನಿಗೆ ಒಂದು ದಿನಕ್ಕೆ ಸರಿಸುಮಾರು 200 ಲೀಟರ್ಸ್ ಗಳಷ್ಟು ನೀರು ಬೇಕಾಗುತ್ತೆ ಅಂತ ತಿಳಿಸಿರುತ್ತಾರೆ. ಅಂದರೆ 200 x 365 = 73000 ಲೀಟರ್ಸ್ ಗಳಷ್ಟು ನೀರು ಒಂದು ವರ್ಷದ ಲೆಕ್ಕ !!

2) ಕುಡಿಯುವ ನೀರಿನ ಮೂಲಗಳು

ನಾವು ನೀರನ್ನು ಬೇರೆ ಬೇರೆ ಮೂಲಗಳಿಂದ ಪಡೆಯಬಹುದು. ಇದನ್ನು ಈಗ ಒಂದೊಂದಾಗಿ ನೋಡೋಣ.

a) ಅಂತರ್ಜಲ: ಇದನ್ನು ಸರಳವಾಗಿ ಕೊಳವೆ ಬಾವಿ ನೀರು ಅಂತ ಕರೆಯಬಹುದು. ಮಳೆ ನೀರು ಭೂಮಿ ಒಳಗೆ ನಿಧಾನವಾಗಿ ಇಳಿದು ಭೂಮಿಯ ನೂರಾರು ಅಡಿಯ ಕೆಳಗಡೆ ಶೇಖರವಾಗುತ್ತದೆ. ಇದೊಂದು ನಿಧಾನವಾದ ಕ್ರಿಯೆ ಹಾಗು ತುಂಬಾ ಸಮಯ ತೆಗುದುಕೊಳ್ಳುತ್ತದೆ. ಆದ್ದರಿಂದ ಅಂತರ್ಜಲವನ್ನು ಜಾಗ್ರತೆಯಾಗಿ ಉಪಯೋಗಿಸಬೇಕು.

b) ಮೇಲ್ಮೈ ಪದರದ ಹರಿಯುವಿಕೆ: ನಾವು ದಿನನಿತ್ಯವೂ ಕಾಣುವ ಕೆರೆ, ಡ್ಯಾಮ್, ತೆರೆದ ಬಾವಿ ನೀರನ್ನು ಭೂಮಿಯ ಮೇಲ್ಮೈ ಪದರದ ನೀರು ಅಂತ ಕರೆಯಬಹುದು. ಇದು ಮಳೆ ಬಂದಾಗ ಬಹಳ ಬೇಗ ಶೇಖರವಾಗುತ್ತದೆ.

c) ಮಂಜುಗಡ್ಡೆ: ಕುಡಿಯುವ ನೀರು ಮಂಜುಗಡ್ಡೆಯ ರೂಪದಲ್ಲೂ ಕೂಡ ಇರುತ್ತದೆ. ನಮ್ಮ ಹಿಮಾಲಯದಲ್ಲಿ ಹುಟ್ಟುವ ನದಿಗಳೇ ಇದಕ್ಕೆ ಒಂದು ಉದಾಹರಣೆ.

3) ಕೊಳವೆ ಬಾವಿ ನೀರಿನ ಸಮಸ್ಯೆಗಳು

ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಜನರು ಕುಡಿಯುವ ನೀರಿಗಾಗಿ ಕೊಳವೆ ಬಾವಿಯನ್ನು ಅವಲಂಬಿತರಾಗಿರುತ್ತಾರೆ. ಸ್ವಲ್ಪ ಮಟ್ಟಿಗೆ ಕಾವೇರಿ ನೀರು ದೊರೆತರೂ 50% ಕಿಂತಲೂ ಹೆಚ್ಚು ಜನರು ಈಗಲೂ ಕೊಳವೆ ಬಾವಿಯ ನೀರಿನ ಮೇಲೆ ಅವಲಂಬನೆ ಇದೆ. ಕೊಳವೆ ಬಾವಿಯ ನೀರು ಭೂಮಿಯ ಶಿಲಾ ಪದರದಿಂದ ಬರುವುದರಿಂದ ಅದರಲ್ಲಿ ಅಧಿಕ ಖನಿಜಾಂಶಗಳು (ಕ್ಯಾಲ್ಸಿಯಂ, ಮ್ಯಾಗ್ನಿಷಿಯಂ, ಕಬ್ಬಿಣ, TDS ಮುಂತಾದವುಗಳು) ಹೆಚ್ಚಾಗಿರುತ್ತದೆ ಮತ್ತು ನೇರವಾಗಿ ಕುಡಿಯಲು ಯೋಗ್ಯವಾಗಿರುವುದಿಲ್ಲ.

ಈ ನೀರಿನಲ್ಲಿ Hardness ಅಂಶ ಹೆಚ್ಚಾಗಿರುತ್ತದೆ. ಇದಲ್ಲದೆ ಈ ನೀರು ಬೇರೆ ಬೇರೆ ಸಮಸ್ಯೆಗಳನ್ನೂ ಸೃಷ್ಟಿಮಾಡುತ್ತದೆ. ಉದಾಹರಣೆಗೆ, ಈ ನೀರಲ್ಲಿ ಸ್ನಾನ ಮಾಡುವುದರಿಂದ ತಲೆ ಕೂದಲು ಉದರುವುದು, ಚರ್ಮದ ಕಾಯಿಲೆಗಳು ಇತ್ಯಾದಿ.

ಕೊಳವೆ ಬಾವಿಯ ನೀರಿನ Hardness ನಿಂದ ಇನ್ನು ಅನೇಕ ತರಹದ ಸಮಸ್ಯೆಗಳು ಉಂಟಾಗುತ್ತವೆ. ಉದಾಹರಣೆಗೆ, ನಲ್ಲಿ (tap) ಕಟ್ಟಿಕೊಳ್ಳುವುದು, ನೆಲದ ಮೇಲೆ ಬಿಳಿ ಬಣ್ಣದ ಕಲೆಯಾಗುವುದು, ಟಾಯ್ಲೆಟ್ ಫ್ಲಶ್ ಗಳಲ್ಲಿ scaling ಉಂಟಾಗುವುದು ಇತ್ಯಾದಿ ಇತ್ಯಾದಿ.

ಕೊಳವೆ ಬಾವಿಯ ನೀರು ಕುಡಿಯಲಿಕ್ಕೆ ಅಷ್ಟು ಯೋಗ್ಯವಾಗಿಲ್ಲದಿರುವುದರಿಂದ ನಾವು RO Filter ಗಳನ್ನೂ ಉಪಯೋಗಿಸಬೇಕಾಗುತ್ತದೆ. RO Filter ನಿಂದ ನೀರು ತುಂಬಾ ವ್ಯರ್ಥವಾಗುತ್ತದೆ. ಅಂದರೆ 1 ಲೀಟರ್ ಕುಡಿಯುವ ನೀರು ಪಡೆಯಲು 2 ಲೀಟರ್ ನೀರು ವ್ಯರ್ಥವಾಗುತ್ತದೆ.

Hardwater ನಿಂದ ಬಕೆಟ್, ತಂಬಿಗೆ ಮತ್ತು ನಲ್ಲಿ ಮೇಲೆ ಉಂಟಾದ ಕಲೆಗಳು.

4) ಮಳೆ ನೀರು ಕೊಯ್ಲು ಅಂದ್ರೆ ಏನು ?

ಮೇಲೆ ತಿಳಿಸಿದ ಎಲ್ಲ ಸಮಸ್ಯೆಗಳಿಗೆ ಒಂದು ತರಹದ ಪರಿಹಾರ ಎಂದರೆ ಮಳೆ ನೀರು ಕೊಯ್ಲು. ನಿಜವಾಗಲೂ ಮಳೆ ನೀರು ಕೊಯ್ಲು ಅಂದರೆ ಏನು ? ಮಳೆ ನೀರು ಕೊಯ್ಲು ಅಂದರೆ ನಮ್ಮ ಮನೆಯ ಮೇಲ್ಚಾವಣಿಯ ಮೇಲೆ ಬೀಳುವ ಮಳೆ ನೀರನ್ನು ಫಿಲ್ಟರ್ ಮಾಡಿ ಒಂದು ಕಡೆ ಶೇಖರಿಟ್ಟುಕೊಳ್ಳುವುದು. ಇದರಿಂದ ಮಳೆ ಇಲ್ಲದ ಸಮಯದಲ್ಲಿ (ಬೇಸಿಗೆ ಕಾಲದಲ್ಲಿ) ಶೇಖರಿಸಿಕೊಂಡಿರುವ ನೀರನ್ನು ಉಪಯೋಗಿಸಿಕೊಳ್ಳಬಹುದು. ಇನ್ನೊಂದು ತರದಲ್ಲಿ ಮಳೆ ನೀರನ್ನು ಇಂಗುಗುಂಡಿಯಲ್ಲಿ ಹರಿಸಿ ಅದರಿಂದ ನಿಮ್ಮ ಬಾವಿಯ ನೀರಿನ ಮಟ್ಟವನ್ನು ಕಾಪಾಡಿಕೊಳ್ಳುವುದು, ಬೇಸಿಗೆಯಲ್ಲೂ ಕೂಡಾ !!

ಮಳೆನೀರು ಶೇಖರಣೆಗಾಗಿ ನೀವು ಒಳ್ಳೆ ದರ್ಜೆಯ ಪ್ಲಾಸ್ಟಿಕ್ ಡ್ರಮ್ಸ್ ಗಳನ್ನು ಉಪಯೋಗಿಸಬಹಹುದು ಅಥವಾ ಕಾಂಕ್ರೀಟ್ ತೊಟ್ಟಿಯನ್ನು ಕೂಡ ಉಪಯೋಗಿಸಬಹುದು. ಒಂದು ಮಳೆ ನೀರು ಕೊಯ್ಲು ವ್ಯವಸ್ತೆ ಮಾಡಿಸಿಕೊಳ್ಳಲು ಎಷ್ಟು ಖರ್ಚು ಆಗುತ್ತದೆ ಅಂತ ಒಂದು ಪ್ರಶ್ನೆಗೆ ಉತ್ತರ, ಮುಂದೆ ನೋಡೋಣ.

ಮಳೆನೀರು ನೆಲದ ಮೇಲೆ ಬೀಳುವುದಕ್ಕಿಂತ ಮುಂಚೆ ಅದನ್ನು ಶೇಖರಿಸುವುದು ಉತ್ತಮ ವಿಧಾನ. ಉದಾಹರಣೆಗೆ, ಮನೆಯ ಮೇಲ್ಚಾವಣಿ ಮೇಲೆ ಬೀಳುವ ನೀರನ್ನು ಫಿಲ್ಟರ್ ಮಾಡುವುದು ಸುಲಭ ಹಾಗು ಕಮ್ಮಿ ಖರ್ಚು. ಅದೇ ನೆಲದ ಮೇಲೆ ಬಿದ್ದ ನೀರನ್ನು ಫಿಲ್ಟರ್ ಮಾಡುವುದು ಕಠಿಣ ಹಾಗೂ ಖರ್ಚು ಕೂಡ ಹೆಚ್ಚು. ಏಕೆಂದರೆ ಮಳೆ ನೀರು ನೆಲದ ಮೇಲೆ ಬಿದ್ದ ತಕ್ಷಣ ಅದು ಬೇಗ ಕಲುಷಿತವಾಗುತ್ತದೆ.

ಈಗ ಮಳೆನೀರು ಕೊಯ್ಲು ಮಾಡುವ ವಿಧಾನವನ್ನು ಒಂದೊಂದಾಗಿ ತಿಳಿದುಕೊಳ್ಳೋಣ. ನಾನು ಇಲ್ಲಿ 3 ವಿಧಾನಗಳನ್ನು ವಿವರಿಸಿರುತ್ತೇನೆ. ಅದಕ್ಕೆ ತಕ್ಕದಾದ ವಿಡಿಯೋ ಕೂಡಾ Youtube ನಲ್ಲಿ ಲಭ್ಯವಿದೆ.

a ) ಮಳೆ ನೀರು ಶೇಖರಣೆ ವಿಧಾನ: ಈ ವಿಧಾನದಲ್ಲಿ ನಿಮ್ಮ ಮೇಲ್ಚಾವಣಿಯ ಮೇಲೆ ಬೀಳುವ ನೀರನ್ನು ಫಿಲ್ಟರ್ ಮೂಲಕ ಹಾಯಿಸಿ ಅನಂತರ ಶುದ್ಧವಾದ ನೀರನ್ನು ತೊಟ್ಟಿಯಲ್ಲಿ ಶೇಖರಿಸಿಟ್ಟುಕೊಳ್ಳುವುದು. ನಾನು ಇದರ ಬಗ್ಗೆ ಒಂದು ವಿಡಿಯೋ ಮಾಡಿದೀನಿ. ಅದು ನನ್ನ Youtube ಚಾನೆಲ್ ನಲ್ಲಿ ಲಭ್ಯವಿದೆ. Click ಮಾಡಿ ಈ ವಿಡಿಯೋ ನೋಡಬಹುದು. ಇದು ಇಂಗ್ಲಿಷ್ ಭಾಷೆಯಲ್ಲಿ ಇದೆ.

b) ಇಂಗು ಗುಂಡಿ ವಿಧಾನ: ಈ ವಿಧಾನದಲ್ಲಿ ಮೇಲ್ಚಾವಣಿಯಿಂದ ಹರಿದುಬಂದ ನೀರುನ್ನು ಒಂದು ಇಂಗು ಗುಂಡಿಗೆ ಬಿಡುವುದು. ಇದಕ್ಕೆ ವಾಟರ್ ಫಿಲ್ಟರ್ ನ ಅವಶ್ಯಕತೆ ಇರುವುದಿಲ್ಲ ಆದರೇ ನಿಮ್ಮ ಮೇಲ್ಚಾವಣಿಯನ್ನು ಶುದ್ಧವಾಗಿ ಇರಿಸಿಕೊಳ್ಳಬೇಕಾಗುತ್ತದೆ. ಇದರಿಂದ ನಿಮ್ಮ ತೆರೆದ ಬಾವಿಯು ಬೇಸಿಗೆಯ ಸಮಯದಲ್ಲಿ ಬತ್ತಿಹೋಗುವ ಸಂದರ್ಭ ಕಮ್ಮಿ ಇರುತ್ತದೆ. ಇದರಿಂದ ನಿಮ್ಮ ಕೊಳವೆ ಬಾವಿಗೆ ಅಷ್ಟು ಅನುಕೂಲ ಆಗುವುದಿಲ್ಲ ಏಕೆಂದರೆ, ಇದು ಭೂಮಿಯ ಮೇಲ್ಪದರವನ್ನು recharge ಮಾಡುತ್ತದೆ. ಇದರ ಬಗ್ಗೆ ಕೂಡ ಒಂದು ವಿಡಿಯೋ ಇದೆ. ಅದನ್ನು ನೀವು ಕೆಳಗೆ ನೋಡಬಹುದು.

c) ಕೊಳವೆ ಬಾವಿ ಮರು ಪೂರಣ: ಇದನ್ನು “Direct Borewell Recharging” ಅಂತ ಕೂಡ ಕರೆಯುತ್ತಾರೆ. ಕೊಳವೆ ಬಾವಿ ಮರುಪೂರಣದಿಂದ ಅಂತರ್ಜಲ ಹೆಚ್ಚಾಗುತ್ತದೆ. ಭೂಮಿಯ ಅಂತರ್ಜಲವನ್ನು ಹೆಚ್ಚಿಸಲು ಇದೊಂದೇ ಪರಿಹಾರ ಮಾರ್ಗ. ರೈತರ ಹೊಲಗಳಲ್ಲಿ ಇದನ್ನು ಸಾಮಾನ್ಯವಾಗಿ ಅಳವಡಿಸಿಕೊಂಡಿರುತ್ತಾರೆ.

ಕೊಳವೆ ಬಾವಿ ಮರುಪೂರಣದಿಂದ ಇನ್ನೊಂದು ಪ್ರಯೋಜನ ಏನೆಂದರೆ ನೀರಿನ ಗುಣಮಟ್ಟದಲ್ಲಿ ಗಮನಾರ್ಹ ಬದಲಾವಣೆ ಕಾಣುವುದು. ಮಳೆ ನೀರು ಬಹಳ ಶುದ್ಧವಾಗಿರುವುದರಿಂದ, ಇದು ಖನಿಜಾಂಶ ಕೂಡಿದ ಅಂತರ್ಜಲದ ಜೊತೆಗೆ ಬೆರೆತಾಗ, ಅಂತರ್ಜಲದ ಗುಣಮಟ್ಟ ಹೆಚ್ಚಾಗುತ್ತದೆ.

ನೀವು ನಿಮ್ಮ ನೀರಿನ ತೊಟ್ಟಿ ತುಂಬಿದ ತಕ್ಷಣ, ಉಳಿದ ಮಳೆನೀರನ್ನು ಕೊಳವೆ ಬಾವಿ ಮರುಪೂರಣ ಮಾಡುವುದಕ್ಕೆ ಬಳಸಬಹುದು. ನಮ್ಮ ಮನೆಯಲ್ಲಿ ಕೊಳವೆ ಬಾವಿ ಮರುಪೂರಣ ಪದ್ದತಿಯನ್ನು ಅಳವಡಿಸಿಕೊಂಡಿರುತ್ತೇನೆ. ಇದರ ಬಗ್ಗೆ ಕೂಡ ಒಂದು ವಿಡಿಯೋ ಇದ್ದು. ಇದನ್ನು ನೀವು ಕೆಳಗಡೆ ನೋಡಬಹುದು.

5) ಮಳೆನೀರು ಕೊಯ್ಲು ಬಗ್ಗೆ ಕೆಲವು ಸಲಹೆಗಳು

ನಾನು ಕೆಲವು ಸಲಹೆಗಳನ್ನು ನನ್ನ ಕಡೆಯಿಂದ ಕೆಳಗೆ ಕೊಟ್ಟಿರುತ್ತೇನೆ. ಇದು ನಿಮಗೆ ಉಪಯೋಗವಾಗಬಹುದು.

a ) ನೀವು ಹೊಸದಾಗಿ ಮನೆ ಕಟ್ಟಿಸುತ್ತಿದ್ದರೆ, ಆವಾಗಲೇ ಮಳೆನೀರು ಕೊಯ್ಲು ಅಳವಡಿಸಿಕೊಳ್ಳಿ, ಅಂದರೆ ಎಲ್ಲಿ rain filter ಅಳವಡಿಸಬೇಕು, ಎಷ್ಟು ಇಂಚು ಪೈಪ್ ಹಾಕಬೇಕು, ಇತ್ಯಾದಿ ಇತ್ಯಾದಿ. ನಿಮಗೆ ಇದರಿಂದ ಖರ್ಚು ಕಮ್ಮಿ ಆಗುತ್ತದೆ.

b ) ನಾನು Rainy ಬ್ರಾಂಡ್ ರೈನ್ ವಾಟರ್ ಫಿಲ್ಟರ್ ಅಳವಡಿಸಿಕೊಂಡಿದ್ದೀನಿ. ಇದು ನನ್ನ ಪ್ರಕಾರ ಒಂದು ಒಳ್ಳೆ ಫಿಲ್ಟರ್. ಇದಕ್ಕೆ ಹೆಚ್ಚು maintenance ಬೇಕಾಗಿಲ್ಲ. ಅಂದರೆ ಇದು ಬೇಗ ಕಟ್ಟಿಕೊಳ್ಳುವುದಿಲ್ಲ. ಇದು ಬೇರೆ ಬೇರೆ model ಗಳಲ್ಲಿ ಲಭ್ಯವಿದೆ, ನಿಮ್ಮ ಮೇಲ್ಚಾವಣಿಯ ಅಳತೆಗೆ ಸರಿಯಾದ model ಖರೀದಿಸಿ. ಉದಾಹರಣೆಗೆ, Rainy FL-100 ಮಾಡೆಲ್ 30×40 ಅಳತೆಯ ಮೇಲ್ಚಾವಣಿಗೆ ಸೂಕ್ತವಾಗಿರುತ್ತದೆ. ನಿಮಗೆ ಸೂಕ್ತವಾದ filter ಅನ್ನು ಖರೀದಿಸಿ. ಬೇರೆ ಬೇರೆ ಬ್ರಾಂಡ್ ಕೂಡ ಚೆಕ್ ಮಾಡಿ.

c ) First rain seperator ನಿಂದ ನೀರನ್ನು ಆಗಾಗ್ಗೆ Flush ಮಾಡಬೇಕಾಗಿರುವುದರಿಂದ, ಇದರ ನೀರನ್ನು ನಿಮ್ಮ ಮನೆಯ ಹೊರಗಡೆ ಇರುವ ಚರಂಡಿಗೆ ಹೋಗುವ ವ್ಯವಸ್ಥೆ ಮಾಡಿಸಿಕೊಳ್ಳಿ

d) ಇಂಗು ಗುಂಡಿ ತುಂಬಿದ ತಕ್ಷಣ ಅದರ ನೀರನ್ನು ಹೊರಗೆ ಹೋಗುವ ವ್ಯವಸ್ಥೆ ಮಾಡಿಸಿಕೊಳ್ಳಿ.

6) ಮಳೆನೀರು ಕೊಯ್ಲು ಅಳವಡಿಕೆಗೆ ಎಷ್ಟು ಖರ್ಚು ಆಗುತ್ತದೆ?

ನನಗೆ ನನ್ನ Youtube ಚಾನೆಲ್ ನಲ್ಲಿ ಸಾಮಾನ್ಯವಾಗಿ ಕೇಳುವ ಪ್ರಶ್ನೆ ಏನೆಂದರೆ, ಇದರ ಅಳವಡಿಕೆಗೆ ಎಷ್ಟು ದುಡ್ಡು ಖರ್ಚಾಗುತ್ತೆ ಅಂತ. ಇದನ್ನು ಈಗ ನೋಡೋಣ ಬನ್ನಿ. ಈ ವಿವರ ಸ್ವಲ್ಪ ಹಳೆಯದು, ಅಂದರೆ 2018-2019 ರದ್ದು. ನಿಮ್ಮ ಒಂದು reference ಗೆ ಈ ಮಾಹಿತಿ ಕೊಟ್ಟಿದ್ದೇನೆ. ನೀವು ಇದರಲ್ಲಿ ಯಾವುದು ಬೇಡವೋ ಅದನ್ನು ತೆಗೆದು ಉಳಿದಿದ್ದನ್ನು ಇಟ್ಟುಕೊಂಡು ಅಂದಾಜು ಮೊತ್ತವನ್ನು ತೆಗೆದುಕೊಳ್ಳಬಹುದು.

7. ಕೊನೆ ಮಾತು

ಮುಂದೆ ಬರುವ ವರ್ಷಗಳಲ್ಲಿ ನೀರಿನ ಸಮಸ್ಯೆಗಳು ತುಂಬಾ ಗಂಭೀರವಾಗುವ ಸಾಧ್ಯತೆಗಳು ಇರುವುದರಿಂದ, ಇದರ ಬಗ್ಗೆ ಇವತ್ತಿನಿಂದನೇ ಕಾಳಜಿವಹಿಸುವುದು ಸೂಕ್ತ ಅಂತ ನನ್ನ ಅನಿಸಿಕೆ. ಈ ಲೇಖನದ ಬಗ್ಗೆ ಕೂಡ ನಿಮ್ಮ ಅಭಿಪ್ರಾಯವನ್ನು (ಇಮೇಲ್ ಮೂಲಕ) ತಿಳಿಸಿ. ಈ ಮಾಹಿತಿ ಇಷ್ಟವಾದರೆ, ಬೇರೆಯವರಜೊತೆ ಹಂಚಿಕೊಳ್ಳಿ

ಧನ್ಯವಾದಗಳು
ಪ್ರವೀಣ್ ಕುಮಾರ್ 🙂