ಮಿತ್ರರೇ
ನಮಗೆಲ್ಲ ಗೊತ್ತಿರುವ ಹಾಗೆ ನೀರು ನಮ್ಮ ಬದುಕಿನ ಒಂದು ಅವಿಭಾಜ್ಯ ಅಂಗ. ನೀವು ಸ್ವಲ್ಪ ದಿನ ಊಟ ಬಿಟ್ಟು ಬದುಕಬಹುದು ಆದರೆ ನೀರನ್ನು ಬಿಟ್ಟು ಎರಡು ದಿನ ಕೂಡ ಬದುಕಿರಲು ಸಾಧ್ಯವಿಲ್ಲ. ಅಷ್ಟು ನೀರಿನ ಅವಲಂಬನೆ ನಮ್ಮ ದೇಹಕ್ಕಿದೆ.
ಕಳೆದ ಒಂದು ದಶಕದಿಂದ ನೀರಿನ ಮಟ್ಟ ಭೂಮಿಯ ಪಾತಾಳಕ್ಕೆ ಇಳಿಯುತ್ತಿದೆ. ಮೊದಲೆಲ್ಲ 100 – 200 ಅಡಿಗೆ ಸಿಗುತ್ತಿದ್ದ ನೀರು, ಈಗ 1000 – 2000 ಅಡಿ ಭೂಮಿ ಕೊರೆದರೂ ನೀರು ಸಿಕ್ಕೆ ಸಿಗುತ್ತದೆ ಅಂತ ಗ್ಯಾರಂಟಿ ಇಲ್ಲ.
ಭೂಮಿಯ ಆಳಕ್ಕೆ ಹೋದಂತೆಲ್ಲ ಕುಡಿಯುವ ಅಥವಾ ಉಪಯೋಗಿಸುವ ನೀರಿನ ಗುಣಮಟ್ಟ ಕಡಿಮೆ ಆಗುತ್ತಾ ಹೋಗುತ್ತದೆ. ಏಕೆಂದರೆ ಈ ನೀರು ಶಿಲಾಪದರದ ಮಧ್ಯ ಸಿಗುತ್ತದೆ ಹಾಗು ಇದು ಶಿಲೆಯಲ್ಲಿರುವ ಖನಿಜಾಂಶಗಳನ್ನು ಹೀರಿಕೊಂಡಿರುತ್ತದೆ. ಇಲ್ಲಿ ಸಿಗುವ ನೀರನ್ನು ಅಂತರ್ಜಲ ಅಂತ ಕೂಡ ಕರೆಯುತ್ತಾರೆ.
Table of Contents
1. ಅಂತರ್ಜಲ (Ground Water) ಹೇಗೆ ಶೇಖರವಾಗುತ್ತದೆ?
ಅಂತರ್ಜಲ ಅಮೂಲ್ಯವಾದದ್ದು. ಕೆಲವೊಂದು ಪ್ರದೇಶಗಳಲ್ಲಿ ಇದು ಶೇಖರವಾಗಲು ಸಾವಿರಾರು ವರ್ಷಗಳೇ ಬೇಕಾಗುತ್ತದೆ. ಈ ಅಂತರ್ಜಲ ಹೇಗೆ ರಚನೆಯಾಗುತ್ತದೆ ಅಂತ ತಿಳಿದುಕೊಳ್ಳುವುದಕ್ಕೆ ನನ್ನ YouTube ಚಾನೆಲ್ ನಲ್ಲಿ ಒಂದು ವಿಡಿಯೋ ಇದೆ. ಇದನ್ನು ನೀವು ಈ ಲೇಖನದ ಕೊನೆಯಲ್ಲಿ ಕೊಟ್ಟ ಲಿಂಕ್ ಕ್ಲಿಕ್ ಮಾಡಿ ನೋಡಬಹುದು.
ಭೂಮಿಯ ಆಳದಿಂದ ಬಂದ ಈ ನೀರು ಸಾಮಾನ್ಯವಾಗಿ ಗಡಸು ನೀರಾಗಿರುತ್ತದೆ ಅಂದರೆ ಇದು Hard Water.
ಈ ನೀರಿನ ಗಡಸುತನ (Hardness) ನಿಂದ ಆಗುವ ತೊಂದರೆ ಅಷ್ಟಿಷ್ಟಲ್ಲ. ಇದನ್ನು ಯಾವುದೇ Processing ಮಾಡದೆ ಹಾಗೆ ಉಪಯೋಗಿಸಿದರೆ ಇದರಿಂದ ತೊಂದರೆ ಕಟ್ಟಿಟ್ಟ ಬುತ್ತಿ. ಈ ನೀರಿನಿಂದ ದಿನಾಲೂ ಸ್ನಾನ ಮಾಡುವುದರಿಂದ ಹಲವಾರು ಜನರಲ್ಲಿ ತಲೆ ಕೂದಲು ಉದುರುವ ಸಮಸ್ಯೆ ಕಂಡುಬರುತ್ತದೆ. ಇದಲ್ಲದೆ ಇದು ನಮ್ಮ ಚರ್ಮಕ್ಕೂ ಹಾನಿಕಾರಕ. ಈ ನೀರಲ್ಲಿ ನಾವು ಸೋಪು ಹಚ್ಚಿಕೊಂಡು ಸ್ನಾನ ಮಾಡಿದಾಗ, ನಮ್ಮ ಚರ್ಮದಿಂದ ಸೋಪಿನಂಶ ಸಂಪೂರ್ಣವಾಗಿ ಹೋಗುವುದಿಲ್ಲ. ಇದರಿಂದ ಮೈ ತುರಿಕೆ ಆಗುವ ಸಾಧ್ಯತೆಗಳಿರುತ್ತವೆ.
ಇದಿಷ್ಟೇ ಅಲ್ಲ, ನೀರಿನ ಗಡಸುತನದಿಂದ ನಿಂದ ನಿಮ್ಮ ಮನೆಯ ನಲ್ಲಿಗಳು (Taps) ಕಟ್ಟಿಕೊಳ್ಳುತ್ತದೆ. ಮನೆಯ ನೆಲ ಕಲೆಯಾಗುತ್ತದೆ ಮತ್ತು ಅದನ್ನು ತೆಗೆಯಲು ರಾಸಾಯನಿಕಗಳನ್ನು ಉಪಯೋಗಿಸಬೇಕಾಗುತ್ತೆ. ಬಕೆಟ್ ಹಾಗು ತಂಬಿಗೆಗಳ ಅಡಿಯಲ್ಲಿ Scaling ಉಂಟಾಗುತ್ತದೆ.
ನೀರಿನ ಗಡುಸುತನಕ್ಕೆ ಮುಖ್ಯ ಕಾರಣ, ಅದ್ರಲ್ಲಿರುವ ಕ್ಯಾಲ್ಸಿಯಂ ಮತ್ತು ಮ್ಯಾಗ್ನಿಷಿಯಂ ಅಂಶಗಳು. ಈ ಅಂಶಗಳು ಶಿಲೆಯಲ್ಲಿ (ಬಂಡೆಯಲ್ಲಿ) ಕಂಡುಬರುತ್ತದೆ. ಉದಾಹರಣೆಗೆ ಮಳೆ ನೀರು, ಭೂಮಿಯ ಸುಣ್ಣದ ಕಲ್ಲಿನ ಪದರ (Lime Stone Layer) ನಿಂದ ಹಾದು ಕೆಳಗಡೆ ಇಳಿದಾಗ, ಅದಕ್ಕೆ ಕ್ಯಾಲ್ಸಿಯಂ ಸೇರ್ಪಡೆಯಾಗುತ್ತದೆ ಏಕೆಂದರೆ ಸುಣ್ಣದ ಕಲ್ಲಿನಲ್ಲಿ ಅಧಿಕವಾಗಿ ಕ್ಯಾಲ್ಸಿಯಂ ಅಂಶ ಇರುತ್ತದೆ.

ಇಷ್ಟೆಲ್ಲ ಸಮಸ್ಯೆಗಳನ್ನೂ ಹೊತ್ತು ತರುವ ಗಡಸು ನೀರನ್ನು ಹೇಗೆ ಉಪಯೋಗವಾಗುವಂತೆ ಮಾಡುವುದು ? ಇದಕ್ಕೆ ಸದ್ಯಕ್ಕೆ ಇರುವ ಪರಿಹಾರ Water Softener. ಈಗ ನೀರಿನ ಗಡುಸುತನದ ಬಗೆಯನ್ನು ನೋಡೋಣ.
ನೀರಿನ ಗಡಸುತನವನ್ನು ಎರಡು ಬಗೆಯಾಗಿ ವಿಂಗಡಿಸಬಹುದು.
– ತಾತ್ಕಾಲಿಕ ಗಡಸುತನ (Temporary Hardness )
– ಶಾಶ್ವತ ಗಡಸುತನ (Permanent Hardness)
ತಾತ್ಕಾಲಿಕ ಗಡಸುತನವನ್ನು ಸುಲಭವಾಗಿ ತೆಗೆಯಬಹುದು. ಕೇವಲ ನೀರನ್ನು ಕುದಿಸಿದರೆ ಸಾಕು, ಈ ತರದ ಗಡಸುತನ ದೊರವಾಗುತ್ತದೆ ಆದರೆ ಶಾಶ್ವತ ಗಡಸುತನವನ್ನು ತೆಗೆಯುವುದು ಅಷ್ಟು ಸುಲಭವಲ್ಲ ಹಾಗು ಇದು ದುಬಾರಿ ಕೂಡ. ಶಾಶ್ವತ ಗಡಸುತನವನ್ನು ತೆಗೆಯಲು ಒಂದೇ ಮಾರ್ಗವೆಂದರೆ ರಾಸಾಯನಿಕ ಸಂಸ್ಕರಣೆ (Chemical Processing) ಮಾಡುವುದು. ರಾಸಾಯನಿಕ ಸಂಸ್ಕರಣೆ ಹಲವಾರು ಬಗೆಯಲ್ಲಿ ಮಾಡಬಹುದು. ಇದರಲ್ಲಿ ಒಂದು ಪ್ರಮುಖವಾದದು ಅಯಾನು ವಿನಿಮಯ ವಿಧಾನ (ion exchange method).
2. Water softener ನ ಭಾಗಗಳು
ನೀರಿನ ಸಾಫ್ಟನರ್ ನಲ್ಲಿ ಕೆಳಗೆ ಕೊಟ್ಟಿರುವ ಭಾಗಗಳಿರುತ್ತವೆ.
- ಸಿಲೆಂಡರ್ (Cylinder)
- ರೆಸಿನ್ (Resin)
- ಮಲ್ಟಿಪೋರ್ಟ್ ವಾಲ್ವು (Multiport Valve )
- ಪೈಪ್ ಗಳು ಮತ್ತು ನೀರನ್ನು ನಿಯಂತ್ರಿಸುವ ಕಂಟ್ರೋಲ್ ವಾಲ್ವು ಗಳು
- ಒತ್ತಡ ತೋರಿಸುವ ಮೀಟರ್ (Pressure meter )
ಕೆಳಗಿನ ಚಿತ್ರದಲ್ಲಿ ನೀರಿನ ಸಾಫ್ಟನರ್ ಹೇಗೆ ಜೋಡಿಸಿದ್ದಾರೆ ಅಂತ ತಿಳಿಯೋಣ.

ಈಗ ಸಾಫ್ಟನರ್ ಹೇಗೆ ಕೆಲಸ ಮಾಡುತ್ತದೆ ಅಂತ ನೋಡೋಣ. ಮೇಲೆ ತಿಳಿಸಿದಂತೆ ಇದು ಅಯಾನ್ ವಿನಿಮಯ ವಿಧಾನದ ಮೇಲೆ ಕೆಲಸ ಮಾಡುತ್ತದೆ. ಸಾಫ್ಟನರ್ ಸಿಲಿಂಡರ್ ಒಳಗೆ ರೆಸಿನ್ ತುಂಬಿಸಿರುತ್ತಾರೆ. ಈ ರೆಸಿನ್ ಒಂದು ತರ ಪಾಲಿಮರ್ ಅಂತ ಕರೆಯಬಹುದು. ಇದನ್ನು ಲೀಟರ್ ಗಳಲ್ಲಿ ಅಳತೆ ಮಾಡುತ್ತಾರೆ. ಒಂದು ರೆಸಿನ್ ಒಂದು ಸಾಸಿವೆ ಕಾಳಿನಷ್ಟು ಗಾತ್ರವಿರುತ್ತದೆ. ಈ ಒಂದು ರೆಸಿನ್ ಅನ್ನು ‘ರೆಸಿನ್ ಬೀಡ್’ ಅಂತ ಕರೆಯೋಣ.
3. Water Softener ಹೇಗೆ ಕೆಲಸ ಮಾಡುತ್ತದೆ ?
ಪ್ರತಿಯೊಂದು ರೆಸಿನ್ ಬೀಡ್ ನೆಗೆಟಿವ್ ಚಾರ್ಜ್ ಆಗಿರುತ್ತದೆ. ಆದ್ದರಿಂದ ಇದರ ಮೇಲೆ ಸೋಡಿಯಂ ಅಯಾನ್ ಕುಳಿತುಕೊಂಡಿರುತ್ತದೆ, ಏಕೆಂದರೆ ಸೋಡಿಯಂ ಅಯಾನು ಪಾಸಿಟಿವ್ ಚಾರ್ಜ್ ಆಗಿರುತ್ತದೆ.
ಈಗ ಗಡಸು ನೀರನ್ನು ಈ ರೆಸಿನ್ ಬೀಡ್ ಮೇಲೆ ಹಾಯಿಸಿದಾಗ, ಕ್ಯಾಲ್ಸಿಯಂ ಮತ್ತು ಮ್ಯಾಗ್ನಿಷಿಯಂ ಅಯಾನುಗಳು ರೆಸಿನ್ ಬೀಡ್ ಮೇಲೆ ಅಂಟುಕೊಳ್ಳುತ್ತವೆ ಹಾಗೂ ಸೋಡಿಯಂ ಅಯಾನು ಹೊರಹೋಗುವ ನೀರಿಗೆ ಬಿಡುಗಡೆಯಾಗುತ್ತದೆ. ಈ ಕ್ರಿಯೆಯಿಂದ ನಮಗೆ ನೀರಿನ ಗಡಸುತನ ನಿವಾರಣೆಯಾಗುತ್ತದೆ.

3 – 4 ವಾರಗಳ ನಂತರ, ರೆಸಿನ್ ಬೀಡ್ ಮೇಲೆ ಯಾವುದೇ ಸೋಡಿಯಂ ಅಯಾನು ಇರುವುದಿಲ್ಲ ಏಕೆಂದರೆ ರೆಸಿನ್ ಬೀಡ್ ಮೇಲೆ ಸಂಪೂರ್ಣವಾಗಿ ಕ್ಯಾಲ್ಸಿಯಂ ಮತ್ತು ಮ್ಯಾಗ್ನಿಷಿಯಂ ಅಯಾನು ಅಂಟಿಕೊಂಡಿರುತ್ತದೆ. ಈ ಸಂದರ್ಭದಲ್ಲಿ ನಮಗೆ ಮತ್ತೆ ಗಡಸು ನೀರು ದೊರೆಯಲು ಪ್ರಾರಂಭವಾಗುತ್ತದೆ. ಇದಕ್ಕೆ ಉಪಾಯವೇನೆಂದರೆ, ರೆಸಿನ್ ಬೀಡ್ ಮೇಲೆ ಉಪ್ಪಿನ ನೀರಿನ ದ್ರಾವಣವನ್ನು ಹರಿಸುವುದು. ಇದರಿಂದ ಮತ್ತೆ ರೆಸಿನ್ ಬೀಡ್ ಮೇಲೆ ಸೋಡಿಯಂ ಅಯಾನು ಮರು ಸ್ಥಾಪನೆಯಾಗುತ್ತದೆ. ಈ ವಿಧಾನಕ್ಕೆ ರಿಜೆನೆರೇಷನ್ (Regeneration) ಅಂತ ಕರೆಯುತ್ತಾರೆ.
4. Water Softener ಏನು ಕೆಲಸ ಮಾಡಲ್ಲ ?
ನೀರಿನ ಸಾಫ್ಟನರ್ ನೀರಿನಲ್ಲಿರುವ ಗಡಸುತನವನ್ನು ಮಾತ್ರ ಕಡಿಮೆ ಮಾಡುತ್ತದೆ. ಇದು ನೀರಿನಲ್ಲಿರುವ ಬೇರೆ ಅಂಶಗಳು, ಉದಾಹರಣೆಗೆ, ಕಬ್ಬಿಣ, ಮ್ಯಾಂಗನೀಸ್, ಅಮೋನಿಯಾ, TDS ಮುಂತಾದವುಗಳನ್ನು ನಿರ್ಮೂಲನೆ ಮಾಡುವುದಿಲ್ಲ. ಇದಲ್ಲದೆ ನೀರಿನ PH Value ಇದರಿಂದ ಬದಲಾಗುವುದಿಲ್ಲ ಹಾಗೂ ನೀರಿನಲ್ಲಿರುವ ಬ್ಯಾಕ್ಟಿರೀಯಾ, ವೈರಸ್ ಕೂಡ ನಿವಾರಣೆಯಾಗುವುದಿಲ್ಲ.
5. Water Softener ಮಾಡೆಲ್ ಮತ್ತು ದರಗಳು.
ನಾನು ಮೇಲೆ ತಿಳಿಸಿದ ಮಾಹಿತಿ Manual ಸಾಫ್ಟನರ್ ನದ್ದು. ಅಂದರೆ ಇದರ regeration ನಾವೇ ಮಾಡಬೇಕಾಗುತ್ತದೆ. ಇದು ಹಲವಾರು Capacity ಗಳಲ್ಲಿ ದೊರೆಯುತ್ತದೆ. ನಾನು 100 ಲೀಟರ್ಸ್ ಸಾಮರ್ಥ್ಯವುಳ್ಳ ಸಾಫ್ಟನರ್ ಉಪಯೋಗಿಸುತ್ತಿದ್ದೇನೆ. ಇದರ ಅರ್ಥ 100 ಲೀಟರ್ ರೆಸಿನ್ ಅನ್ನು ಸಾಫ್ಟನರ್ ಒಳಗೆ ತುಂಬಿಸಿರುತ್ತಾರೆ. 200 ಹಾಗು 300 ಲೀಟರ್ ಸಾಮರ್ಥ್ಯವುಳ್ಳ ಸಾಫ್ಟನರ್ ಕೂಡ ದೊರೆಯುತ್ತದೆ.
100 ಲೀಟರ್ಸ್ ಸಾಮರ್ಥ್ಯದ ಸಾಫ್ಟನರ್ 33,000/- ದಿಂದ 37,000/- ವರೆಗೆ ದೊರೆಯುತ್ತದೆ. ಇದಲ್ಲದೆ 2 ರಿಂದ 3 ಸಾವಿರವನ್ನು pipe accessories + installation ಮಾಡುವುದಕ್ಕೆ ಕೊಡಬೇಕಾಗುತ್ತದೆ. ಪ್ರತಿ ತಿಂಗಳಿಗೊಮ್ಮೆ regeneration ಮಾಡುವುದಕ್ಕೆ 150/- ರೂಪಾಯಿಗಳಸ್ಟು ಖರ್ಚಾಗುತ್ತದೆ. regeration ಮಾಡುವುದಕ್ಕೆ ಸಾಧಾರಣ ಉಪ್ಪನ್ನೇ ಬಳಸಿ (Iodised salt ಬಳಸಬೇಡಿ).
ಈ ಮಾಹಿತಿಯನ್ನು ಬೇರೆಯವರ ಜೊತೆ ಹಂಚಿಕೊಳ್ಳಿ. Water ಸಾಫ್ಟನರ್ ಬಗ್ಗೆ ನನ್ನ YouTube ಚಾನೆಲ್ ನಲ್ಲಿ ವಿಡಿಯೋಗಳನ್ನೂ ಕೂಡ ನೋಡಬಹುದು. ಲಿಂಕ್ ಕೆಳಗೆ ಕೊಟ್ಟಿರುತ್ತೇನೆ.
ಧನ್ಯವಾದಗಳು
ಪ್ರವೀಣ್ ಕುಮಾರ್ 🙂